ಜ್ಯೂನಿಪರ್ -
	ಕಾನಿಫೆರೀ ಗುಂಪಿನ ಕ್ಯೂಪ್ರೆಸೇಸೀ ಕುಟುಂಬಕ್ಕೆ ಸೇರಿದ ನಿತ್ಯಹರಿದ್ವರ್ಣ ಸಸ್ಯ. ಜ್ಯೂನಿಪರಸ್ ಶಾಸ್ತ್ರೀಯ ನಾಮ. ಇದು ಸುಮಾರು 40 ಪ್ರಭೇದಗಳನ್ನು ಒಳಗೊಂಡಿದೆ. ಇವೆಲ್ಲವೂ ಪ್ರಧಾನವಾಗಿ ಉತ್ತರಾರ್ಧಗೋಳದ ಸಸ್ಯಗಳು. ಆರ್ಕಟಿಕ್ ವಲಯದಿಂದ ಹಿಡಿದು ಉಷ್ಣವಲಯಗಳ ಪರ್ವತಗಳವರೆಗೂ ಇವುಗಳ ವ್ಯಾಪ್ತಿ ಉಂಟು. ಮೆಡಿಟರೇನಿಯನ್ ತೀರ ಪ್ರದೇಶ, ಉತ್ತರ ಅಟ್ಲಾಂಟಿಕ್ ದ್ವೀಪಗಳು, ಯೂರೋಪ್, ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವಭಾಗಗಳಲ್ಲಿ ಹೇರಳವಾಗಿವೆ. ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುವ 5 ಪ್ರಭೇದಗಳು ಕಾಣದೊರೆಯುತ್ತವೆ. ಇವುಗಳ ವ್ಯಾಪ್ತಿಯೆಲ್ಲ 1700 - 5000 ಮೀ. ಎತ್ತರದ ಹಿಮಾಲಯ ಪರ್ವತ ಪ್ರದೇಶದಲ್ಲೇ ಹೆಚ್ಚು. ಬೇರೆ ದೇಶಗಳಿಂದ ತಂದು ಬೆಳೆಸಿರುವ ಪ್ರಭೇದಗಳೂ ಉಂಟು. ಇವುಗಳಲ್ಲಿ ಹೆಚ್ಚಿನವು ಅಂದವಾಗಿ ಎಲ್ಲೆಡೆಗೂ ಹರಡಿಕೊಂಡು ಇಲ್ಲವೇ ಪಿರಮಿಡ್ ಆಕೃತಿಯಲ್ಲಿ ಬೆಳೆಯುವುದರಿಂದ ಇವನ್ನು ರಸ್ತೆಬದಿಗಳಲ್ಲಿ ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದುಂಟು. 

	ಜ್ಯೂನಿಪರ್ ಜಾತಿಯ ಪ್ರಭೇದಗಳು ಪೊದೆಸಸ್ಯಗಳಾಗಿ ಇಲ್ಲವೇ ಸಣ್ಣಗಾತ್ರದ ಮರಗಳಾಗಿ ಬೆಳೆಯುತ್ತವೆ. ತೊಗಟೆ ಕೆಂಪುಮಿಶ್ರಿತ ಕಂದುಬಣ್ಣದ್ದು: ತೆಳುವಾದ ಪಟ್ಟೆಗಳಂತೆ ಸುಲಿದು ಬೀಳುತ್ತದೆ. ಎಲೆಗಳು ಎರಡು ತೆರನಾಗಿವೆ. ಕೆಲವು ಪ್ರಭೇದಗಳಲ್ಲಿ ಸುಮಾರು 1.2 ಸೆಂ.ಮೀ. ಉದ್ದದ ಚೂಪಾದ ಸೂಜಿಗಳಿಂತೆ ಇದ್ದರೆ ಇನ್ನು ಕೆಲವಲ್ಲಿ ಕಾಂಡಕ್ಕೆ ಒತ್ತಾಗಿ ಅಂಟಿಕೊಳ್ಳುವ ಶಲ್ಕಗಳಿಂತಿವೆ. ಕೆಲವು ಬಗೆಗಳಲ್ಲಿ ಕಾಂಡದ ಕೆಳಭಾಗದ ರೆಂಬೆಗಳಲ್ಲಿನ ಎಲೆಗಳು ಸೂಜಿಗಳಂತೆಯೂ ಮೇಲ್ಭಾಗದ ರೆಂಬೆಗಳಲ್ಲಿನವು ಶಲ್ಕಗಳಂತೆಯೂ ಇರುವುದುಂಟು. ಇನ್ನೂ ಕೆಲವು ಬಗೆಗಳಲ್ಲಿ ಗಿಡ ಎಳೆಯದಿರುವಾಗ ಸೂಜಿಯಂಥ ಎಲೆಗಳೂ ಅದು ಬೆಳೆದ ಮೇಲೆ ಶಲ್ಕಗಳಂಥ ಎಲೆಗಳೂ ಇರಬಹುದು. ಶಲ್ಕಗಳಂಥ ಎಲೆಗಳ ಬುಡದಲ್ಲಿ ತೈಲಗ್ರಂಥಿಗಳಿವೆ. ಇದರಿಂದಾಗಿ ಗಿಡಗಳಿಗೆ ಒಂದು ತೆರನ ಸುವಾಸನೆಯಿರುತ್ತದೆ. ಜ್ಯೂನಿಪರ್ ಗಿಡದ ಹೂಗಳು ಏಕಲಿಂಗಿಗಳು. ಹೆಣ್ಣು ಮತ್ತು ಗಂಡು ಹೂಗಳು ಒಂದೇ ಸಸ್ಯದಲ್ಲಿರಬಹುದು ಇಲ್ಲವೆ ಬೇರೆ ಬೇರೆ ಸಸ್ಯಗಳಲ್ಲಿರಬಹುದು. ಎರಡು ತೆರನ ಹೂಗಳೂ ಶಂಕುಗಳಲ್ಲಿ ಸಮಾವೇಶಗೊಂಡಿವೆ. ಹೆಣ್ಣುಶಂಕುವಿನಲ್ಲಿ 1-4 ಸುತ್ತಿನ ಶಲ್ಕಗಳಿವೆ. ಇವುಗಳಲ್ಲಿ ಒಂದೇ ಒಂದು ಸುತ್ತು ಮಾತ್ರ ಫಲವಂತಿಯಾಗಿದೆ. ನಿಷೇಚನವಾದ ಅನಂತರ ಇಡೀ ಶಂಕುವೇ ಬೆಳೆದು ರಸ ತುಂಬಿಕೊಂಡು ಬೆರಿಯನ್ನು ಹೋಲುವ ಕಾಯಿಯಾಗುತ್ತದೆ. ಇದಕ್ಕೆ ಜ್ಯೂನಿಪರ್ ಬೆರಿ ಎಂತಲೇ ಹೆಸರು. ಇದರೊಳಗೆ ಒಂದು ಮೂರು, ಐದು, ಕೆಲವೊಮ್ಮೆ ಎಂಟು ಬೀಜ ಇರುತ್ತವೆ. ಜ್ಯೂನಿಪರ್ ಕಾಯಿಗಳಲ್ಲಿ ಒಂದು ವಿಶೇಷರೀತಿಯ ಎಣ್ಣೆಯುಂಟು. ಇದರಿಂದ ಕಾಯಿಗಳಿಗೆ ಸಿಹಿರುಚಿ ಇದೆ. ಇದರ ವಾಸನೆಯನ್ನು ಜಿನ್ ಪಾನೀಯದಲ್ಲಿ ಗುರುತಿಸಬಹುದು.

	ಜ್ಯೂನಿಪರ್ ಮರಗಳು ಭಾರತದ ಬೆಟ್ಟಸೀಮೆಗಳಲ್ಲಿನ ಮರಳುಮಿಶ್ರಿತ, ಗೋಡುಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಲ್ಲವು. ಇವನ್ನು ಬೀಜ, ಕಾಂಡ ತುಂಡುಗಳ ಮೂಲಕ ಬೆಳೆಸಬಹುದು. ಬೀಜಗಳು ಮೊಳೆಯಲು ಕೆಲವೊಮ್ಮೆ ಒಂದು ವರ್ಷ ಹಿಡಿಯುವುದಾದರೂ ಬಿತ್ತುವ ಮುನ್ನ ಬಿಸಿನೀರಿನಲ್ಲಿ ಕೆಲವು ಮಿನಿಟುಗಳು ನೆನೆಸಿದರೆ ಬೇಗ ಮೊಳೆಯುವುವು.

	ಜ್ಯೂನಿಪರ್ ಅನೇಕ ಬಗೆಯಲ್ಲಿ ಬಳಕೆಯಲ್ಲಿದೆ. ಇದರ, ಮುಖ್ಯವಾಗಿ ಕಮ್ಯೂನಿಸ್ ಪ್ರಭೇದದ, ಕಾಯಿಗಳನ್ನು ಜಿನ್ ಪಾನೀಯಕ್ಕೂ ಆಹಾರ ಪದಾರ್ಥಗಳಿಗೂ ವಾಸನೆ ಕಟ್ಟಲೂ ಬಳಸುವುದುಂಟು. ಅಲ್ಲದೆ ಯೂರೋಪಿನಲ್ಲಿ ಕಾಯಿಗಳಿಂದಲೇ ನೇರವಾಗಿ ಜಿನ್ನಿನಂಥ ಮಾದಕ ಪಾನೀಯವನ್ನು (ಇದರಲ್ಲಿ 40%-50% ಆಲ್ಕೊಹಾಲ್ ಇರುತ್ತದೆ) ತಯಾರು ಮಾಡುವುದಿದೆ. ಕಾಯಿಗಳು ಆಸ್ಕಾರ್ಬಿಕ್ ಆಮ್ಲದ ಉತ್ತಮ ಆಗರವೂ ಹೌದು. ಪ್ರತಿ 100 ಗ್ರಾಂ. ಕಾಯಿಯಲ್ಲಿ 35 ಮಿ.ಗ್ರಾಂ. ಆಸ್ಕಾರ್ಬಿಕ್ ಆಮ್ಲ ಉಂಟು. ಕಾಯಿಗಳನ್ನು ಬಟ್ಟಿಯಿಳಿಸಿ ಎಣ್ಣೆಯನ್ನು ಹೊರ ತೆಗೆಯಲಾಗುತ್ತದೆ. ಮಾದಕಪಾನೀಯಗಳಿಗೆ ವಾಸನೆಕಟ್ಟಲು ಈ ಎಣ್ಣೆ ಉಪಯುಕ್ತ. ಕಾಯಿಗಳಿಗೂ ಎಣ್ಣೆಗೂ ಔಷಧೀಯ ಗುಣವುಂಟು. ಇವು ಜೀರ್ಣಕಾರಿ, ಉತ್ತೇಜಕ ಮತ್ತು ಮೂತ್ರೋತ್ತೇಜಕ, ಸ್ವೇದಕಾರಿ ಹಾಗೂ ಜಂತುನಾಶಕಗಳು ಎಂದು ಹೆಸರಾಗಿವೆಯಲ್ಲದೆ ಗಾನರೀಯ, ಬಿಳಿಸೆರಗು ಮುಂತಾದ ರೋಗನಿವಾರಕಗಳೂ ಆಗಿವೆ. ಎಣ್ಣೆ ತೆಗೆದು ಉಳಿಯುವ ಕಾಯಿಚರಟವನ್ನು ನೀರಿನಲ್ಲಿ ಕುದಿಸಿ ಸಕಸ್ ಜ್ಯೂನಿಪರಿ ಎಂಬ ಪದಾರ್ಥವನ್ನು ಪಡೆಯಲಾಗುತ್ತದೆ. ಇದನ್ನು ಮೂತ್ರೋತ್ತೇಜಕ ಹಾಗೂ ಸ್ವೇದಕಾರಿಯಾಗಿ ಬಳಸಲಾಗುತ್ತಿತ್ತು. ರಷ್ಯದಲ್ಲಿ ಜ್ಯೂನಿಪರ್ ತೊಗಟೆಯನ್ನು ಚರ್ಮ ಹದಮಾಡುವುದಕ್ಕೆ ಉಪಯೋಗಿಸುತ್ತಾರೆ. ಚೌಬೀನೆ ಸಾಕಷ್ಟು ಗಟ್ಟಿಯಾಗಿದ್ದು ಬಾಳಿಕೆ ಬರುವಂಥದೂ ಸುಲಭವಾಗಿ ಸಂಸ್ಕರಿಸಬಹುದಾದಂತದೂ ಆಗಿದೆ. ಇದಕ್ಕೆ ಸುವಾಸನೆಯೂ ಕಂದು ಬಣ್ಣವೂ ಉಂಟು. ಚೌಬೀನೆಯಿಂದ ಹಲವಾರು ಬಗೆಯ ಉಪಕರಣಗಳನ್ನು ಮಾಡುವರು. ಭಾರತದಲ್ಲಿ ಬೆಳೆಯುವ ಮ್ಯಾಕ್ರೊಪೊಡ ಪ್ರಭೇದದ ಚೌಬೀನೆಯಿಂದ ಪೆನ್ಸಿಲ್‍ಗಳನ್ನು ತಯಾರಿಸುವರು. ಕೆಲವೆಡೆ ಮರವನ್ನೂ ಎಳೆಯ ಕಡ್ಡಿಗಳನ್ನೂ ಧೂಪದ ಕಡ್ಡಿಗಳಾಗಿ ಬಳಸುವುದುಂಟು. ತೊಗಟೆಯಿಂದ ಹಗ್ಗ ತಯಾರಿಸುವುದಿದೆ. ಅಕ್ಸಿಸೆಡ್ರಸ್ ಪ್ರಭೇದದ ಎಣ್ಣೆಯನ್ನು ಸೂಕ್ಷ್ಮದರ್ಶಕದಲ್ಲಿಟ್ಟು ನೋಡಬೇಕಾದ ತೆಳುಕೊಯ್ತಗಳನ್ನು ಪಾರದರ್ಶಕಮಾಡಲು ಉಪಯೋಗಿಸುತ್ತಾರೆ.

	ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಜ್ಯೂನಿಪರ್ ಪ್ರಭೇದಗಳಲ್ಲಿ ಮುಖ್ಯವಾದವು ಜ್ಯೂ. ಕಮ್ಯೂನಿಸ್ (ಕಾಮನ್ ಜ್ಯೂನಿಪರ್), ಜ್ಯೂ. ಮ್ಯಾಕ್ರೊಪೊಡ (ಇಂಡಿಯನ್ ಜ್ಯೂನಿಪರ್ ಅಥವಾ ಹಿಮಾಲಯನ್ ಪೆನ್ಸಿಲ್ ಸೀಡರ್), ಜ್ಯೂ.ರಿಕರ್ವ (ವೀಪಿಂಗ್ ಬ್ಲೂ ಜ್ಯೂನಿಪರ್) ಮತ್ತು ಜ್ಯೂ.ವಾಲಿಚಿಯಾನ (ಬ್ಲ್ಯಾಕ್ ಜ್ಯೂನಿಪರ್)ಗಳು. ಬೇರೆ ದೇಶಗಳಿಂದ ತಂದು ಬೆಳೆಸಿರುವ ಪ್ರಭೇದಗಳ ಜ್ಯೂ. ವರ್ಜಿನಿಯಾನ (ರೆಡ್ ಸೀಡರ್, ಪೆನ್ಸಿಲ್ ಸೀಡರ್), ಜ್ಯೂ. ಪ್ರಾಸೆರ (ಈಸ್ಟ್ ಆಫ್ರಿಕನ್ ಸೀಡರ್), ಜ್ಯೂ. ಬಮ್ರ್ಯುಡಯಾನ (ಬಮ್ರ್ಯುಡ ಸೀಡರ್) ಮತ್ತು ಜ್ಯೂ. ಚೈನೆನ್ಸಿಸ್‍ಗಳು ಪ್ರಮುಖವೆನಿಸಿವೆ.
(ಎಂ.ಡಿ.)
ಪರಿಷ್ಕರಣೆ : ಹರೀಶ್ ಭಟ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ